ವಾಲ್ಮೀಕಿ ◇ 
	ರಾಮಾಯಣವನ್ನು ರಚಿಸಿದನೆನ್ನಲಾದ ಒಬ್ಬ ಬ್ರಹ್ಮರ್ಷಿ. ಪ್ರಚೇತಸನ ಮಗ. ಈತ ಪೂರ್ವಾಶ್ರಮದಲ್ಲಿ ಬೇಡರ ಸಹವಾಸ ಸೇರಿ ಕಾಡಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ. ಒಮ್ಮೆ ಸಪ್ತರ್ಷಿಗಳು ಇದಿರಾದಾಗ ಅವರು ಈತನಿಗೆ ತಿಳಿವಳಿಕೆ ಹೇಳಿ ಜ್ಞಾನಮಾರ್ಗದ ಕಡೆ ತಿರುಗಿಸಿದರು. ಅವರ ಉಪದೇಶದಂತೆ ರಾಮಮಂತ್ರ ಧ್ಯಾನದಲ್ಲಿ ಮೈಮರೆತ್ತಿದ್ದಾಗ ಈತನ ಮೇಲೆ ಹುತ್ತ ಬೆಳೆಯಿತು. ಅದೇ ದಾರಿಯಲ್ಲಿ ಹಿಂದಿರುಗಿ ಬರುತ್ತಿದ್ದ ಸಪ್ತರ್ಷಿಗಳಿಗೆ ಈತನನ್ನು ಕಂಡು ಅಚ್ಚರಿಯಾಯಿತು. ವಲ್ಮೀಕದ ಒಳಗೆ ಉಸಿರಾಡುತ್ತಿದ್ದ ಇವನನ್ನು ಎಚ್ಚರಗೊಳಿಸಿ ವಾಲ್ಮೀಕಿ ಎಂದು ಹೆಸರಿಟ್ಟರು. ಸಂಪೂರ್ಣವಾಗಿ ಋಷಿ ಜೀವನಕ್ಕೆ ಮರಳಿದ್ದ ವಾಲ್ಮೀಕಿ ಒಂದು ದಿನ ಸ್ನಾನಕ್ಕಾಗಿ ತಮಸಾ ನದಿಗೆ ಹೋಗಿದ್ದಾಗ ಬೇಡನೊಬ್ಬ ಮಿಥುನದಲ್ಲಿದ್ದ ಕ್ರೌಂಚಪಕ್ಷಿಗಳಲ್ಲಿ ಗಂಡನ್ನು ಹೊಡೆದುರುಳಿಸಿದ್ದನ್ನು ನೋಡಿದ. ವಾಲ್ಮೀಕಿ ಬೇಡನಿಗೆ ಶಾಪಕೊಡಲು ಬಾಯಿ ತೆರೆದಾಗ ಛಂದೋಬದ್ಧವಾದ (ಶ್ಲೋಕ) ಮಾತುಗಳು ಹೊರಬಂದುವು. ಈ ಘಟನೆಯಿಂದ ವ್ಯಾಕುಲಗೊಂಡ ಋಷಿ ಆಶ್ರಮ ಸೇರಿದ. ಆಗ ಅಲ್ಲಿಗೆ ಬ್ರಹ್ಮ ಬಂದು ರಾಮಾಯಣವನ್ನು ಬರೆಯ ಹೇಳಿದ. ವಾಲ್ಮೀಕಿಯ ಶೋಕ ಶ್ಲೋಕ ರೂಪದಲ್ಲಿ ರಾಮಾಯಣದ ಕಥೆಯಾಗಿ ಹೊರಹೊಮ್ಮಿತು. ನಾರದನು ವಾಲ್ಮೀಕಿಗೆ ರಾಮಾಯಣದ ಕಥೆ ಹೇಳಿದ. ಮುಂದೆ ಲವಕುಶರು ಈ ರಾಮಾಯಣವನ್ನು ರಾಮನ ಆಸ್ಥಾನದಲ್ಲಿ ಹಾಡಿದರು(ನೋಡಿ: ರಾಮಾಯಣ).

	ರಾಮ ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ ಹೋದಾಗ ವಾಲ್ಮೀಕಿ ಇವರನ್ನು ಸತ್ಕರಿಸಿದ. ರಾಮನ ಅಪ್ಪಣೆಯಂತೆ ಲಕ್ಷ್ಮಣನು ಗರ್ಭಿಣಿಯಾದ ಸೀತೆಯನ್ನು ಅರಣ್ಯದಲ್ಲಿ ಬಿಟ್ಟು ಹೋದಾಗ, ಒಂಟಿಯಾಗಿ ಕಂಗಾಲಾಗಿದ್ದ ಆಕೆಯನ್ನು ವಾಲ್ಮೀಕಿ ತನ್ನ ಆಶ್ರಮಕ್ಕೆ ಕರೆದೊಯ್ದು ಋಷಿಪತ್ನಿಯರ ಮೂಲಕ ಶುಶ್ರೂಷೆ ಮಾಡಿಸಿ ಸುಖಪ್ರಸವವಾಗುವಂತೆ ನೋಡಿಕೊಂಡ. ಆಕೆಗೆ ಹುಟ್ಟಿದ ಅವಳಿ ಮಕ್ಕಳಿಗೆ ಲವ, ಕುಶರೆಂದು ನಾಮಕರಣಮಾಡಿ ಅವರನ್ನು ಸಾಕಿ, ವಿದ್ಯಾಭ್ಯಾಸ ಮಾಡಿಸಿ ಶಸ್ತ್ರಾಭ್ಯಾಸದಲ್ಲಿ ನಿಪುಣರನ್ನಾಗಿ ಮಾಡಿದ. ರಾಮನ ಅಶ್ವಮೇಧದ ಕುದುರೆ ಅಲ್ಲಿಗೆ ಬಂದಾಗ ಲವಕುಶರು ಅದನ್ನು ಕಟ್ಟಿಹಾಕಿ ಘೋರ ಕಾಳಗ ಮಾಡಿದರು. ಆಗ ಅಲ್ಲಿಗೆ ಬಂದ ವಾಲ್ಮೀಕಿ ತಂದೆಮಕ್ಕಳನ್ನು ಪರಿಚಯಿಸಿ ಯುದ್ಧ ನಿಲ್ಲಿಸಿದ. ವಾಲ್ಮೀಕಿಯು ಯೋಗವಾಸಿಷ್ಠವೆಂಬ ತಾತ್ತ್ವಿಕ ಕೃತಿಯನ್ನೂ ಬರೆದಿದ್ದಾಗಿ ತಿಳಿದು ಬರುತ್ತದೆ.								
	(ಬಿ.ಎನ್.ಎನ್.ಬಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ